ಅಪರಾಧಿಕ ನ್ಯಾಯಾಲಯಗಳು: ಏನು? ಎತ್ತ? ಭಾಗ – 2

Court of Sessions / ಸತ್ರ ನ್ಯಾಯಾಲಯಗಳು:

ದಂಡ ಪ್ರಕ್ರಿಯಾ ಸಂಹಿತೆಯ ಕಲಂ 7ರಂತೆ ಪ್ರತಿ ರಾಜ್ಯವು ಒಂದು ಸತ್ರ ವಿಭಾಗವಾಗಿರುತ್ತದೆ (Sessions Division) ಅಥವಾ ಹಲವು ಸತ್ರ ವಿಭಾಗಗಳನ್ನು ಒಳಗೊಂಡಿರುತ್ತದೆ ಹಾಗೂ ಪ್ರತಿ ಸತ್ರ ವಿಭಾಗವು ಒಂದು ಅಥವಾ ಹೆಚ್ಚಿನ ಜಿಲ್ಲೆಗಳನ್ನೊಳಗೊಂಡಿರುತ್ತದೆ. ಉದಾಹರಣೆಗೆ: ಕರ್ನಾಟಕದ ಪ್ರತಿ ಜಿಲ್ಲೆಯನ್ನೂ ಒಂದೊಂದು ಸತ್ರ ವಿಭಾಗವನ್ನಾಗಿ
ವಿಂಗಡಿಸಲಾಗಿದೆ ಹಾಗೂ ಒಂದೊಂದು ಜಿಲ್ಲೆಯಲ್ಲೂ ಒಂದೊಂದು ಸತ್ರ ನ್ಯಾಯಾಲಯವಿದೆ. ಆದರೆ, ಸಿಕ್ಕಿಂ, ಒಂದು ಸಣ್ಣ ರಾಜ್ಯವಾಗಿದ್ದು ಆ ರಾಜ್ಯದಲ್ಲಿ ಒಂದಕ್ಕಿಂತಲೂ ಹೆಚ್ಚಿನ ಜಿಲ್ಲೆಗಳನ್ನು ಸೇರಿಸಿ ಒಂದು ಸತ್ರ ವಿಭಾಗವನ್ನಾಗಿಸಿ ಆ ವಿಭಾಗಕ್ಕೆ ಒಂದೇ ಸತ್ರ ನ್ಯಾಯಾಲಯವಿದೆ. ಅದಲ್ಲದೇ, ಪ್ರತಿ ಮಹಾನಗರವೂ ಒಂದು ಸತ್ರ ವಿಭಾಗವಾಗಿರತಕ್ಕದ್ದೆಂದು ದಂಡ ಸಂಹಿತೆ ಹೇಳುತ್ತದೆ. ಉದಾಹರಣೆಗೆ ಬೆಂಗಳೂರು ಮಹಾನಗರವನ್ನು ಒಂದು ಪ್ರತ್ಯೇಕ ಸತ್ರ ವಿಭಾಗವೆಂದು ಪರಿಗಣಿಸಲಾಗಿದ್ದು, ಬೆಂಗಳೂರು
ಮಹಾನಗರದ ವ್ಯಾಪ್ತಿಯಲ್ಲಿನ ಎಲ್ಲಾ ಪ್ರಕರಣಗಳು ಬೆಂಗಳೂರು ನಗರ ಸಿವಿಲ್ ಹಾಗೂ ಸತ್ರ ನ್ಯಾಯಾಲಯದ (City Civil and Sessions Court) ಕಾರ್ಯವ್ಯಾಪ್ತಿಯಲ್ಲಿ ಬರುತ್ತವೆ. ಆದರೆ, ಬೆಂಗಳೂರು ನಗರ ಜಿಲ್ಲೆಯಲ್ಲಿದ್ದೂ ಸಹ ಮಹಾನಗರದ ಕಾರ್ಯವ್ಯಾಪ್ತಿಯಿಂದ ಹೊರಗಿರುವ ಪ್ರದೇಶದ ಪ್ರಕರಣಗಳು ಬೆಂಗಳೂರು ಗ್ರಾಮಾಂತರ ಸತ್ರ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತವೆ.

ಹಾಗಾದರೆ, ಸತ್ರ ನ್ಯಾಯಾಲಯಗಳನ್ನು ಸ್ಥಾಪಿಸುವವರ್ಯಾರು? ದಂಡ ಸಂಹಿತೆಯ ಕಲಂ 9ರ ಅಡಿಯಲ್ಲಿ, ಈ ಹೊಣೆ ಸರಕಾರದ್ದು. ಸತ್ರ ನ್ಯಾಯಾಲಯಗಳಲ್ಲಿ ಸತ್ರ ನ್ಯಾಯಾಧೀಶರು, ಅಪರ ಸತ್ರ ನ್ಯಾಯಾಧೀಶರು ಹಾಗೂ ಸಹಾಯಕ ಸತ್ರ ನ್ಯಾಯಾಧೀಶರು ಇರಬಹುದು. ಇವರಲ್ಲಿ ಸಹಾಯಕ ಸತ್ರ ನ್ಯಾಯಾಧೀಶರು ಸತ್ರ ನ್ಯಾಯಾಧೀಶರಿಗೆ ಆಡಳಿತದ ದೃಷ್ಠಿಯಲ್ಲಿ
ಅಧೀನರಾಗಿರುತ್ತಾರೆ. ಅಲ್ಲದೇ ಅವರ ಅಧಿಕಾರ ಸತ್ರ/ಅಪರ ಸತ್ರ ನ್ಯಾಯಾಧೀಶರಿಗಿಂತಲೂ ಕಡಿಮೆ ಇರುತ್ತದೆ. ಆದರೆ, ಅಪರ ಸತ್ರ ನ್ಯಾಯಾಧೀಶರು ಕೇಸು ನಡೆಸುವಾಗ ಹಾಗೂ ಶಿಕ್ಷೆ ವಿಧಿಸುವ ಅಧಿಕಾರಗಳಲ್ಲಿ ಸತ್ರ ನ್ಯಾಯಾಧೀಶರಿಗೆ ಸಮಾನವಾಗಿರುತ್ತಾರೆ.

ಅಪರಾಧಿಕ ನ್ಯಾಯಾಲಯಗಳ ಕಾರ್ಯಗಳು ಹಾಗೂ ಅಧಿಕಾರಗಳು :

ದಂಡ ಪ್ರಕ್ರಿಯಾ ಸಂಹಿತೆಯ ಕಲಂ 26ರಂತೆ, ಭಾರತೀಯ ದಂಡ ಸಂಹಿತೆಯಡಿಯಲ್ಲಿನ (Indian Penal Code /IPC/ಭಾದಂಸಂ) ಯಾವುದೇ ಅಪರಾಧಗಳ ಅಧಿವಿಚಾರಣೆಯನ್ನು (Trial) ಉಚ್ಚ ನ್ಯಾಯಾಲಯ ಅಥವಾ ಸತ್ರ ನ್ಯಾಯಾಲಯ
ಅಥವಾ ದಂಡ ಪ್ರಕ್ರಿಯಾ ಸಂಹಿತೆಯ (CrPC) 1ನೇ ಅನುಸೂಚಿಯಡಿಯಲ್ಲಿ ತೋರಲಾದ ಯಾವುದೇ ನ್ಯಾಯಾಲಯಗಳು ನಡೆಸಬಹುದು. (ಅದಾಗ್ಯೂ ನಿರ್ಭಯಾ ದುರಂತದ ನಂತರ ಬಂದ ಕಾನೂನು ತಿದ್ದುಪಡಿಯಲ್ಲಿ ಹೇಳಲಾದಂತೆ ಲೈಂಗಿಕ ಅಪರಾಧಗಳ ಅಧಿವಿಚಾರಣೆಗಳನ್ನು ಅದಷ್ಟು ಮಟ್ಟಿಗೆ ಮಹಿಳಾ ನ್ಯಾಯಮೂರ್ತಿಗಳಿಂದ ನಡೆಸಲು ಪ್ರಾವಧಾನ ಕಲ್ಪಿಸಲಾಗಿದೆ.) ಅಂದರೆ, ಭಾರತೀಯ ದಂಡ ಸಂಹಿತೆಯಡಿಯಲ್ಲಿ ನೀಡಲಾದ ಪ್ರತಿಯೊಂದು ಅಪರಾಧದ ಅಧಿವಿಚಾರಣೆಗೂ ಸರಿಯಾದ ನ್ಯಾಯಾಲಯ ಯಾವುದೆಂದು ದಂಡ ಪ್ರಕ್ರಿಯಾ ಸಂಹಿತೆಯಲ್ಲಿ ಹೇಳುತ್ತದೆ. ಉದಾಹರಣೆಗೆ: ಭಾ.ದ.ಸಂ ಕಲಂ 302ರ ಕೊಲೆ ಪ್ರಕರಣಗಳ ಅಪರಾಧಗಳ ಅಧಿವಿಚಾರಣೆಯನ್ನು ಸತ್ರ ನ್ಯಾಯಾಲಯ ಮಾಡುತ್ತದೆ ಹಾಗೂ ಕಲಂ 324 ರಡಿಯಲ್ಲಿ ಗಾಯ ಉಂಟು ಮಾಡಿದ ಪ್ರಕರಣಗಳನ್ನು ನ್ಯಾಯಿಕ ದಂಡಾಧಿಕಾರಿಗಳು (ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್) ಅಧಿವಿಚಾರಣೆ ನಡೆಸುತ್ತಾರೆ.

ಆದರೆ, ಭಾರತೀಯ ದಂಡ ಸಂಹಿತೆಯನ್ನು ಹೊರತುಪಡಿಸಿ ಇನ್ನಾವುದೇ ಅಪರಾಧಿಕ ಕಾನೂನುಗಳಿಲ್ಲವೇ? ಹಾಗಿದ್ದಲ್ಲಿ ಅವುಗಳ ವಿಚಾರಣೆಯನ್ನಾರು ಮಾಡಬೇಕು? ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ, ಭ್ರಷ್ಟಾಚಾರ ತಡೆ ಕಾಯ್ದೆಯಂತಹ ಇನ್ನಿತರ ವಿಶೇಷ ಅಪರಾಧಿಕ ಕಾಯ್ದೆಗಳು ತನ್ನಲ್ಲೇ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಅವಕಾಶ ಕಲ್ಪಿಸಿವೆ. ಹಾಗೆ ವಿಶೇಷವಾಗಿ ಹೇಳದಿದ್ದ ಪಕ್ಷದಲ್ಲಿ, ದಂಡ ಪ್ರಕ್ರಿಯಾ ಸಂಹಿತೆಯ 1ನೇ ಅನುಸೂಚಿಯಡಿಯ 2ನೇ ಭಾಗದಲ್ಲಿ ವಿಚಾರಣೆ
ನಡೆಸಲು ಸಕ್ಷಮ ನ್ಯಾಯಾಲಯಗಳಾವುವು ಎಂಬುದನ್ನು ಹೇಳಲಾಗಿದೆ:

ಮರಣ ದಂಡನೆ, ಜೀವಾವಧಿ ಶಿಕ್ಷೆ ಹಾಗೂ 7 ವರ್ಷಕ್ಕೂ ಮೀರಿದ ಕಾರಾವಾಸ ಶಿಕ್ಷೆಯನ್ನು ನಿಗದಿಪಡಿಸಲಾದ ಅಪರಾಧ ಪ್ರಕರಣಗಳನ್ನು ಸತ್ರ ನ್ಯಾಯಾಲಯ ವಿಚಾರಣೆ ನಡೆಸತಕ್ಕದ್ದು; 3 ವರ್ಷಕ್ಕೂ ಮೀರಿದ ಹಾಗೂ 7ವರ್ಷಗಳನ್ನು ಮೀರದ ಕಾರಾವಾಸ ಶಿಕ್ಷೆಯನ್ನು ನಿಗದಿಪಡಿಸಲಾದ ಅಪರಾಧ ಪ್ರಕರಣಗಳನ್ನು ಮೊದಲ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಅಧಿಕಾರಿಗಳು ವಿಚಾರಣೆ ನಡೆಸತಕ್ಕದ್ದು ಹಾಗೂ 3 ವರ್ಷಕ್ಕೂ ಕಡಿಮೆ ಶಿಕ್ಷೆ ಅಥವಾ ಕೇವಲ ದಂಡವನ್ನು ನಿಗಧಿಪಡಿಸಲಾದ ಅಪರಾಧ ಪ್ರಕರಣಗಳನ್ನು ಯಾವುದೇ ನ್ಯಾಯಿಕ ದಂಡಾಧಿಕಾರಿಗಳು ವಿಚಾರಣೆ ನಡೆಸಬಹುದು.

ಅಪರಾಧಗಳನ್ನು ಶಿಕ್ಷೆಯ ಪ್ರಮಾಣದ ಆಧಾರದಲ್ಲಿ ವಿಂಗಡಿಸಿ ಅಧಿವಿಚಾರಣೆ ನಡೆಸುವುದಾದರೆ, ಪ್ರತಿ ನ್ಯಾಯಾಧೀಶರಿಗೂ ಇಂತಿಷ್ಟೇ ಶಿಕ್ಷೆ ನೀಡುವ ನಿರ್ಬಂಧವಿದೆಯೇ? ಹೌದು. ದಂಡ ಪ್ರಕ್ರಿಯಾ ಸಂಹಿತೆಯ ಕಲಂ 28 ಹಾಗೂ 29 ವಿವಿಧ ನ್ಯಾಯಾಲಯಗಳು ಹಾಗೂ ನ್ಯಾಯಾಧೀಶರು ವಿಧಿಸಬಹುದಾದ ಗರಿಷ್ಟ ಶಿಕ್ಷೆಯ ಪ್ರಮಾಣವನ್ನು ನಿಗದಿಪಡಿಸುತ್ತದೆ. ಅವುಗಳೆಂದರೆ:

ಉಚ್ಚ ನ್ಯಾಯಾಲಯವು ಕಾನೂನಿನ ಅಡಿಯಲ್ಲಿ ಅನುಮತಿಸಿದ ಯಾವುದೇ ಶಿಕ್ಷೆಯನ್ನು ವಿಧಿಸಲು ಅಧಿಕಾರವಿದೆ;


ಸತ್ರ ಅಥವಾ ಅಪರ ಸತ್ರ ನ್ಯಾಯಾಧೀಶರು ಸಹ ಕಾನೂನಿನ ಅಡಿಯಲ್ಲಿ ಅನುಮತಿಸಿದ ಯಾವುದೇ ಶಿಕ್ಷೆಯನ್ನು ವಿಧಿಸಲುಸಕ್ಷಮ. ಆದರೆ, ಸತ್ರ ನ್ಯಾಯಾಲಯವು ವಿಧಿಸುವ ಮರಣ ದಂಡನೆ ಶಿಕ್ಷೆಯನ್ನು ಉಚ್ಚ ನ್ಯಾಯಾಲಯದಿಂದಖಚಿತಪಡಿಸಿಕೊಳ್ಳುವುದು ಅನಿವಾರ್ಯ;


ಸಹಾಯಕ ಸತ್ರ ನ್ಯಾಯಾಧೀಶರು ಕಾನೂನಿನ ಅಡಿಯಲ್ಲಿ ಅನುಮತಿಸಿದ ಯಾವುದೇ ಶಿಕ್ಷೆಯನ್ನು ವಿಧಿಸಲು ಸಕ್ಷಮರಾಗಿದ್ದರೂ,ಮರಣ ದಂಡನೆ, ಜೀವಾವಧಿ ಶಿಕ್ಷೆ ಅಥವಾ ಹತ್ತು ವರ್ಷಕ್ಕೂ ಮೀರಿದ ಕಾರಾವಾಸದ ಶಿಕ್ಷೆಯನ್ನು ವಿಧಿಸಲು ಸಕ್ಷಮರಾಗಿರುವುದಿಲ್ಲ;


ಇನ್ನು, ಯಾವುದೇ ನ್ಯಾಯಿಕ ದಂಡಾಧಿಕಾರಿಗಳಂತೂ ಮರಣ ದಂಡನೆ, ಜೀವಾವಧಿ ಶಿಕ್ಷೆಗಳನ್ನು ವಿಧಿಸಲು ಸಕ್ಷಮರಲ್ಲ. ಆದರೆ, ಮುಖ್ಯ ನ್ಯಾಯಿಕ ದಂಡಾಧಿಕಾರಿ/ಅಪರ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳು ಅಥವಾ ಮುಖ್ಯ ಮಹಾನಗರ ದಂಡಾಧಿಕಾರಿಗಳು/ ಅಪರ ಮುಖ್ಯ ಮಹಾನಗರ ದಂಡಾಧಿಕಾರಿಗಳು ಕಾನೂನುನಡಿಯಲ್ಲಿ ಅನುಮತಿಸಿದ ಯಾವುದೇ ಶಿಕ್ಷೆಯನ್ನು ಹಾಗೂ 7ವರ್ಷಕ್ಕೂ ಕಡಿಮೆಯುಳ್ಳ ಕಾರಾವಾಸ ಶಿಕ್ಷೆಯನ್ನಿ ವಿಧಿಸಲು ಸಕ್ಷಮರು;

ಹಾಗೆಯೇ, ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು(ಜೆ.ಎಂ.ಎಫ್.ಸಿ) ಹಾಗೂ ದ್ವಿತೀಯ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು (ಜೆ.ಎಂ.ಎಸ್.ಸಿ) ಸಹ ಕಾನೂನಿನಡಿಯಲ್ಲಿ ಸಮ್ಮತಿಸಿದ ಯಾವುದೇ ಶಿಕ್ಷೆಯನ್ನು ನೀಡಬಹುದು. ಆದರೆ, ಜೆ.ಎಂ.ಎಫ್.ಸಿಯವರು ಮೂರು ವರ್ಷಕ್ಕೂ ಮೀರಿದ ಕಾರಾವಾಸ ಶಿಕ್ಷೆಯನ್ನು ಹಾಗೂ ಹತ್ತು ಸಾವಿರ ರೂಪಾಯಿಗಳಿಗೂ ಮೀರಿದ ದಂಡವನ್ನು ವಿಧಿಸುವಂತಿಲ್ಲ.

ಮುಂದುವರೆದು, ಜೆ.ಎಂ.ಎಸ್.ಸಿರವರು ಒಂದು ವರ್ಷಕ್ಕಿಂತಲೂ ಹೆಚ್ಚಿನ ಕಾರಾವಾಸ ಶಿಕ್ಷೆಯನ್ನು ಅಥವಾ ಐದು ಸಾವಿರಕ್ಕಿಂತಲೂ ಹೆಚ್ಚಿನ ಶಿಕ್ಷೆಯನ್ನು ವಿಧಿಸುವಂತಿಲ್ಲ.

ಇನ್ನು ಕರ್ನಾಟಕ ರಾಜ್ಯದಲ್ಲಿರುವ ಅಪರಾಧಿಕ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ಪ್ರತ್ಯೇಕವಾಗಿ ನೇಮಿಸುವುದು ರೂಢಿಯಲ್ಲಿಲ್ಲ. ಆದರೆ, ಬೆಂಗಳೂರು ಮಹಾನಗರ ಪ್ರದೇಶ ಮಾತ್ರ ಪ್ರತ್ಯೇಕ ನ್ಯಾಯಾಲಯ ಹಾಗೂ ನ್ಯಾಯಾಧೀಶರನ್ನು ಹೊಂದಿದೆ. ಆದರೆ, ಉಳಿದ ಜಿಲ್ಲಾ ನ್ಯಾಯಾಲಯಗಳಲ್ಲಿ ಸಾಮಾನ್ಯವಾಗಿ ಸಿವಿಲ್ ನ್ಯಾಯಾಧೀಶರು ಅಥವಾ ಹಿರಿಯ ಸಿವಿಲ್ ನ್ಯಾಯಾದೀಶರುಗಳೇ ಜೆ.ಎಂ.ಎಫ್.ಸಿ ಆಗಿಯೂ, ಅವರಲ್ಲಾರಾದರೊಬ್ಬರು ಹಿರಿಯ ಸಿವಿಲ್ ನ್ಯಾಯಾಧೀಶರು (ಜಿಲ್ಲೆಗೊಬ್ಬರಂತೆ) ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾಗಿಯೂ (ಸಿ.ಜೆ.ಎಂ) ಹಾಗೂ ಜಿಲ್ಲಾ ನ್ಯಾಯಾಧೀಶರೇ ಸತ್ರ / ಅಪರ ಸತ್ರ
ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಮಾನ್ಯವಾಗಿ ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲಿ ಪ್ರತಿ ನ್ಯಾಯಾಧೀಶರು ಪ್ರತಿನಿತ್ಯ ಸರಾಸರಿ 50-60 ಸಿವಿಲ್ ಪ್ರಕರಣಗಳನ್ನೂ ಹಾಗೂ 50-60 ಅಪರಾಧ ಪ್ರಕರಣಗಳ ವಿಚಾರಣೆ ನಡೆಸುತ್ತಾರೆ.

ಈ ಜೆ.ಎಂ.ಎಸ್.ಸಿ ಯಾರು? ಸರ್ವೆ ಸಾಮಾನ್ಯವಾಗಿ ತರಬೇತಿಯಲ್ಲಿರುವ ನ್ಯಾಯಾಧೀಶರಿಗೆ, ನ್ಯಾಯಾಂಗದ ಕಾರ್ಯಪ್ರಕ್ರಿಯೆಯ ಕುರಿತು ತರಬೇತಿ ಪಡೆಯುತ್ತಿರುವ ಕಾರ್ಯಾಂಗದ ಅಧಿಕಾರಿಗಳಿಗೆ ಈ ಅಧಿಕಾರವನ್ನು ಅಲ್ಪಾವಧಿಗೆ ಸಂಬಂಧಿಸಿದ ಉಚ್ಚ ನ್ಯಾಯಾಲಯವು ಪ್ರತ್ಯಾಯೋಜಿಸುತ್ತದೆ.

ಈ ಎರಡು ಲೇಖನಗಳು ಅಪರಾಧಿಕ ನ್ಯಾಯಾಲಯಗಳ ಕುರಿತ ಒಂದು ಪಕ್ಷಿನೋಟವಾಗಿದೆ. ಈ ವಿಷಯಗಳನ್ನು ವಿಸ್ತೃತವಾಗಿ ತಿಳಿದುಕೊಳ್ಳುವುದು ಅತ್ಯಗತ್ಯ. ಇನ್ನು ಹೆಚ್ಚು ತಿಳಿದುಕೊಳ್ಳಲು ದಂಡ ಪ್ರಕ್ರಿಯಾ ಸಂಹಿತೆಯನ್ನು ಓದುವುದು ಒಳಿತು. ಆದರೆ, ದಂಡ ಪ್ರಕ್ರಿಯಾ ಸಂಹಿತೆ, ದಂಡ ಸಂಹಿತೆಯಂತಹ ಬಹು ಮುಖ್ಯ ಕಾನೂನುಗಳು, ಕನ್ನಡದಲ್ಲಿ, ಸರಕಾರದ ವತಿಯಿಂದ ಲಭ್ಯವಿಲ್ಲದಿರುವುದು ವಿಪರ್ಯಾಸ. ಖಾಸಗಿ ಪ್ರಕಾಶಕರು ತರ್ಜುಮೆಗೊಳಿಸಿ ಪ್ರಕಟಿಸಿದ್ದಾರಾಗ್ಯೂ ಅವುಗಳನ್ನು ಓದಿ ಅರ್ಥೈಸುವುದು ಸ್ವಲ್ಪ ಕಷ್ಟವೇ.  ಭಾರತ ಸರಕಾರದ ಇಂಡಿಯಾ ಕೋಡ್ ಹಾಗೂ ರಾಜ್ಯ ಸರಕಾರದ ಸಂಸದೀಯ ವ್ಯವಹಾರಗಳ ಇಲಾಖೆಯು ತಮ್ಮ ತಮ್ಮ ಕಾಯ್ದೆ, ನಿಯಮ ಇತ್ಯಾದಿಗಳನ್ನು ಅಂತರ್ಜಾಲ ತಾಣದ ಮೂಲಕ ಜನರ ಸಮೀಪಕ್ಕೆ ತಂದಿರುವುದೇನೋ ಸ್ವಾಗತಾರ್ಹ.

ಆದರೆ, ಜನ ಸಾಮಾನ್ಯನ ಮೇಲೆ ಪ್ರತಿದಿನ ಪ್ರಭಾವ ಬೀರುವ ಈ ಕಾನೂನುಗಳನ್ನು ಕನ್ನಡದಲ್ಲಿ ತರುವ ಹಾಗೂ ಅವನ್ನು ಸರಳೀಕರಿಸುವ ಕಾರ್ಯದಲ್ಲಿ ಆದ ಪ್ರಗತಿ ಮಾತ್ರ ಕ್ಷೀಣ. ಅಪರಾಧ ಕಾನೂನಿನಲ್ಲಿನ ಬಹುಮುಖ್ಯ ನಿಯಮಗಳಲ್ಲೊಂದು, ಲ್ಯಾಟಿನ್ನಿನ “Ignorantia juris non excusat” (ignorance of law is not an excuse) ಎಂಬ ಉಕ್ತಿ. ಇದನ್ನು ಕನ್ನಡದಲ್ಲಿ ಸ್ಥೂಲವಾಗಿ ಹೇಳಬೇಕೆಂದರೆ, ಕಾನೂನು ತಿಳಿದಿಲ್ಲವೆಂಬುದು ಕಾನೂನಿನ ಉಲ್ಲಂಘನೆಗೆ ಸಮಜಾಯಿಷಿಯಲ್ಲ ಎಂದು. ಆದರೆ, ಕನ್ನಡಿಗನು ತನಗೆ  ದಿನನಿತ್ಯ ಅನ್ವಯವಾಗುವ ಅಪರಾಧಿಕ ಕಾನೂನುಗಳನ್ನು ತಿಳಿಯಬೇಕೆಂದರೂ ಅವನು ಮೊದಲು ಇಂಗ್ಲೀಷಿನವನಾಗಬೇಕು. ಭಾರತಂದಹ ಬಹು ಭಾಷೀಯ ದೇಶದಲ್ಲಿ ಸರಕಾರಗಳು ಕಾನೂನುಗಳನ್ನು ಸರಳಗೊಳಿಸಿ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯಗೊಳಿಸಲು ಹೆಚ್ಚು ಒತ್ತು ನೀಡಿದಾಗ ಮಾತ್ರ ಪ್ರಜೆಗಳಿಂದ ಕಾನೂನು ಪಾಲನೆಯನ್ನು ನಿರೀಕ್ಷಿಸಲು ನೈತಿಕತೆಯನ್ನು ಹೊಂದಿರುತ್ತವೆ.

This website is a private blog owned and managed by a person practicing Advocacy with an intention to share knowledge. The Bar Council of India prohibits advertisement or solicitation by advocates in any form or manner. By accessing this website, you acknowledge and confirm that you are accessing this website/blog of your own accord and that there has been no form of solicitation, advertisement, or inducement by the website owner or its members. The content of this website is for informational purposes only and SHOULD NOT be interpreted as solicitation or advertisement. No material or information provided on this website should be construed as legal advice.